ವಿಂಚಿ, ಲಿಯೊನಾರ್ಡೋ ಡ
	1452-1519. ಇಟಲಿಯ ಸುಪ್ರಸಿದ್ಧ ಚಿತ್ರಕಾರ, ಶಿಲ್ಪಿ, ವಾಸ್ತುವಿಜ್ಞಾನಿ, ಕಲಾವಿಮರ್ಶಕ. ಪ್ರಪಂಚದ ಜ್ಞಾನದ ವಿವಿಧ ಶಾಖೆಗಳಲ್ಲಿ ಪ್ರವೇಶ ಹಾಗೂ ಪರಿಣತಿಯನ್ನು ಪಡೆದಿದ್ದ ತನ್ನ ಕಾಲದ ಮಹಾಮೇಧಾವಿ. 1452 ಏಪ್ರಿಲ್ 15ರಂದು ವಿಂಚಿ ಎಂಬ ಗ್ರಾಮದಲ್ಲಿ ಜನಿಸಿದ. ಈತನ ತಂದೆ ಪಿಯರೆ ಡ ವಿಂಚಿ ಫ್ಲಾರೆ ನ್ಸಿನಲ್ಲಿ ವಕೀಲನಾಗಿದ್ದ. ಕ್ಯಾಥರೀನ್ ಇವನ ತಾಯಿ. ಬಾಲ್ಯವನ್ನು ಈತ ಹುಟ್ಟಿದೂರಿನಲ್ಲಿ ಕಳೆದ. 15ನೆಯ ವಯಸ್ಸಿನಲ್ಲಿ ಫ್ಲಾರೆನ್ಸಿಗೆ, ತನ್ನ ತಂದೆಯ ಬಳಿಗೆ ಬಂದ. ಅಲ್ಲಿ ವಿಖ್ಯಾತ ಶಿಲ್ಪಿ ಮತ್ತು ಚಿತ್ರಕಾರ ವೆರುಚಿಯೊ ಬಳಿ ವಿದ್ಯಾರ್ಥಿಯಾಗಿ ಸೇರಿದ. ಅವನ ಶಿಷ್ಯತ್ವದಲ್ಲಿ ಚಿತ್ರಕಲೆ, ವಾಸ್ತುಶಿಲ್ಪ, ಎಂಜಿನಿಯರಿಂಗ್  ಈ ವಿಷಯಗಳಲ್ಲಿ ಪರಿಣತಿ ಪಡೆದ. ಈತ ವಿದ್ಯಾರ್ಥಿಯಾಗಿದ್ದಾಗ, ವೆರುಚಿಯೊ ರಚಿಸಿದ ಬಾಪ್ಟಿಸಮ್ ಆಫ್ ಕ್ರೈಸ್ಟ್ ಎಂಬ ಕಲಾಕೃತಿಯಲ್ಲಿ ದೇವದೂತನ ಚಿತ್ರವನ್ನು ರಚಿಸಿದ. ಇದು ಇವನ ಪ್ರಥಮ ಚಿತ್ರ. ಈ ಚಿತ್ರ ಕಲಾವಿಮರ್ಶಕರ ಮೆಚ್ಚುಗೆ ಗಳಿಸಿತು. ಈತ ಫ್ಲಾರೆನ್ಸಿನ ಪೇಂಟರ್ಸ್ ಗಿಲ್ಡಿನ ಸದಸ್ಯನಾದ(1472). 1476ರ ತನಕ ವೆರೂಚಿಯೊನೊಡನೆ ಈತ ಕೆಲಸ ಮಾಡಿದನಾದರೂ ಚಿತ್ರಕಲೆಯಲ್ಲಿ ತನ್ನದೇ ಆದ ಸ್ವತಂತ್ರ ಶೈಲಿಯನ್ನು ರೂಢಿಸಿಕೊಂಡ. ಈ ಕಾಲದಲ್ಲಿ ಈತ ರಚಿಸಿದ ಅಡೊರೇಷನ್ ಆಫ್ ಮಾಗಿ ಎಂಬ ಅಪೂರ್ಣಚಿತ್ರ ಇವನ ಕಲೆಗಾರಿಕೆಯ ಸ್ವತಂತ್ರ ಪ್ರವೃತ್ತಿಯನ್ನು ಪ್ರತಿಬಿಂ ಬಿಸುವಂತಿದೆ.

	ಅನಂತರ ಈತ ಮಿಲಾನಿಗೆ ಬಂದ. ಲೊಡ್ವಿಕೊ ದೊರೆಯ ಸೇವೆಯಲ್ಲಿ ಸ್ವತಂತ್ರ ಕಲಾವಿದನಾಗಿ ಸೇರಿದ(1492). ಮಿಲಾನಿನಲ್ಲಿದ್ದ ಆರಂಭದ ದಿನಗಳಲ್ಲಿ ದಿ ಮಡೋನ್ನ ಆಫ್ ದಿ ರಾಕ್ಸ್‍ಎಂಬ ಚಿತ್ರವನ್ನು ನಿರ್ಮಿಸಿದ. ಈ ವರ್ಣಚಿತ್ರ ಇವನ ಸಮಗ್ರ ಶೈಲಿಯ ಅತ್ಯುತ್ತಮ ಉದಾಹರಣೆ. ಪ್ರಪಂಚದ ಅತ್ಯುತ್ತಮ ವರ್ಣಚಿತ್ರಗಳಲ್ಲೊಂದೆಂದು ಸುಪ್ರಸಿದ್ಧವಾಗಿರುವ ದಿ ಲಾಸ್ಟ್ ಸಪ್ಪರ್ ಎಂಬ ಚಿತ್ರವನ್ನು ರಚಿಸಿದ್ದೂ ಇದೇ ಸಮಯದಲ್ಲಿ. ಕ್ರಿಸ್ತನ ಶಿಷ್ಯರ ಮನಸ್ಸಿನ ಸಂಕೀರ್ಣ ಭಾವನೆಗಳನ್ನು ಈ ಚಿತ್ರ ಉಜ್ಜ್ವಲವಾಗಿ ಹಿಡಿದಿಟ್ಟಿದೆ. 

	ಫ್ರೆಂಚರು ಮಿಲಾನನ್ನು ವಶಪಡಿಸಿಕೊಂಡಾಗ  ಈತ ಮತ್ತೆ ಫ್ಲಾರೆನ್ಸಿಗೆ ಹಿಂದಿರುಗಿದ (1499). ಇಲ್ಲಿ ಈತ ರಚಿಸಿದ ಮೋನಾಲಿಸ (ಲಾಗಿಯೊಕೊಂಡ) ಭಾವಚಿತ್ರ ಪ್ರಪಂಚದ ಮಹೋನ್ನತ ಕಲಾಕೃತಿ ಯೆಂಬ ಪ್ರಶಂಸೆಗೆ ಪಾತ್ರವಾಗಿದೆ. ಇದು ಲಾ ಗಿಯೊಕೊಂಡ ಎಂಬ ತರುಣಿ ಯೊಬ್ಬಳ ಪ್ರತಿಕೃತಿ. ಆಕೆ ವ್ಯಾಪಾರಿ ಯೊಬ್ಬನ ಹೆಂಡತಿ. ಆಕೆಯ ಮೋಹಕವಾದ ಮಾಂತ್ರಿಕ ನಸುನಗೆ ಈ ಭಾವಚಿತ್ರದ ವೈಶಿಷ್ಟ್ಯ. ಹಿನ್ನೆಲೆಗಿರುವ ನಿಸರ್ಗದ ನೋಟ ನಗುವಿನ ಚೆಲುವಿಕೆಯನ್ನು ದೀಪ್ತಗೊಳಿಸಿದೆ. ಈತ ದಿ ವರ್ಜಿನ್ ಅಂಡ್ ಚೈಲ್ಡ್ ವಿತ್ ಸೇಂಟ್ ಅನ್ನೆ-ಎಂಬ ಇನ್ನೊಂದು ಚಿತ್ರರಚನೆಯನ್ನು ಫ್ಲಾರೆನ್ಸಿನಲ್ಲಿ ಆರಂಭಿಸಿದನಾದರೂ ಹಲವಾರು ವರ್ಷಗಳ ಅನಂತರ ಅದನ್ನು ಫ್ರಾನ್ಸಿನಲ್ಲಿ ಪೂರ್ಣಗೊಳಿಸಿದಂತೆ ತಿಳಿದುಬರುತ್ತದೆ. 1506ರ ವೇಳೆಗೆ ಈತ ಪುನಃ ಮಿಲಾನಿಗೆ ಹಿಂದಿರುಗಿದ. ಈ ಬಾರಿ ಫ್ರಾನ್ಸಿನ 12ನೆಯ ಲೂಯಿದೊರೆಯ ಸೇವೆಯಲ್ಲಿ ಕಾರ್ಯನಿರತನಾದ ಆರುವರ್ಷಗಳ ಅನಂತರ ರೋಮಿನಲ್ಲಿ ಬ್ರಮಂಟೆ, ರಾಫೆಲ್, ಮೈಕೆಲಂಜೆಲೋ ಈ ಕಲಾವಿದರೊಡನೆ ಸೇರಿಕೊಂಡು 10ನೆಯ ಪೋಪ್ ಲಿಯೊಗಾಗಿ ಕೆಲಸಮಾಡಿದ. ಈ ನಾಲ್ವರು ಕಲಾವಿದರೂ ಸೇರಿ ಹೊಸ ಸೇಂಟ್ ಪೀಟರ್ ಚರ್ಚ್‍ನ ವಿನ್ಯಾಸವನ್ನು ರೂಪಿಸಿದರು. ಡವಿಂಚಿಯ ಕಾರ್ಯಕೌಶಲವನ್ನು ಮೆಚ್ಚಿಕೊಂಡ ಫ್ರಾನ್ಸಿನ ಅನೇಕ ರಾಜರು ಇವನನ್ನು ಫ್ರಾನ್ಸಿನಲ್ಲಿಯೇ ತಂಗಲು ಆಹ್ವಾನಿಸಿದರು. ಇಂಥ ಒಂದು ಆಹ್ವಾನವನ್ನು ಒಪ್ಪಿಕೊಂಡ ಈತ ಫ್ರಾನ್ಸಿನ ಅಂಬೋಯ್ಸೆ ಎಂಬಲ್ಲಿ ನೆಲಸಿದ(1516). ಇಲ್ಲಿ ಈತ ತನ್ನ ಬದುಕಿನ ಕಡೆಗಾಲವನ್ನು ಸುಖವಾಗಿ ಕಳೆದು 1519 ಮೇ 2ರಂದು ನಿಧನನಾದ. 

	ಈತ ಬಹುಮುಖ ಪ್ರತಿಭಾವಂತ. ಅನೇಕ ಬಗೆಯ ಆಧುನಿಕ ಯಂತ್ರಗಳ ಮಾದರಿಗಳನ್ನು ರಚಿಸಿದ್ದಾನೆ; ಬೃಹತ್ ಭವನಗಳ, ನಗರಗಳ ನಕ್ಷೆಗಳನ್ನು ತಯಾರಿಸಿದ್ದಾನೆ; ಭೂವಿಜ್ಞಾನಕ್ಕೆ ಸಂಬಂಧಿಸಿದ ನಕ್ಷೆಗಳನ್ನೂ ರೇಖಾಚಿತ್ರಗಳನ್ನೂ ರಚಿಸಿದ್ದಾನೆ. ಈತ ರಚಿಸಿ ಬಿಟ್ಟುಹೋಗಿರುವ ಈ ಬಗೆಯ ಟಿಪ್ಪಣಿಗಳು (ನೋಟ್‍ಬುಕ್) ಸು. 7000 ಪುಟಗಳಾಗುತ್ತವೆ. ಈತ ಎರಡೂ ಕೈಗಳಲ್ಲಿ ಬರೆಯಬಲ್ಲವನಾಗಿದ್ದ (ಆ್ಯಂಬಿಡೆಕ್ಸ್‍ಟರ್); ಟಿಪ್ಪಣಿಗಳನ್ನು ಪುಸ್ತಕದಲ್ಲಿ ಎಡಗೈಯಲ್ಲಿ ಬಲದಿಂದ ಎಡಕ್ಕೆ ಬರೆದು ಅನಂತರ ಕನ್ನಡಿಯ ಸಹಾಯದಿಂದ ಓದುತ್ತಿದ್ದನಂತೆ. ಈತ ಒಳ್ಳೆಯ ಅಂಗಸಾಧಕನೂ ಸಂಗೀತಗಾರನೂ ಆಗಿದ್ದ. ಸುಂದರವಾದದ್ದೆಲ್ಲ-ಮಾನವೀಯ ಸೌಂದರ್ಯಕೂಡ-ನಾಶವಾಗುತ್ತದೆ. ಅದು ಶಾಶ್ವತವಾಗಿ ಉಳಿಯುವುದು ಕಲೆಯಲ್ಲಿ ಮಾತ್ರ ಎಂದು ಕಲೆಯನ್ನು ಕುರಿತು ಈತ ಅಭಿಪ್ರಾಯಪಟ್ಟಿದ್ದಾನೆ. ಇವನ ಕಲಾಸೃಷ್ಟಿ ಈ ಹೇಳಿಕೆಯನ್ನು ಸಂಪೂರ್ಣವಾಗಿ ಸಮರ್ಥಿಸುತ್ತದೆ.		
	(ಜಿ.ಎನ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ